ವಿಶ್ವ ವಿಖ್ಯಾತ ಮಧುಗಿರಿ ಬೆಟ್ಟ ತುಮಕೂರು ಜಿಲ್ಲೆಯ ಹೆಮ್ಮೆಯ ಪ್ರತೀಕ.
ಮಧುಗಿರಿ ಏಕಶಿಲಾ ಬೆಟ್ಟ ಪ್ರಪಂಚದ ಎರಡನೆಯ ಹಾಗೂ ಏಷ್ಯಾ ಖಂಡದ ಏಕಾಗ್ರ ಶಿಲೆಯ (ಮನೋಲಿಥಿಕ್) ಬೆಟ್ಟವೆಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಗಿದೆ, ಮಧುಗಿರಿಯ ಕೆರೆ, ಕಾಲುವೆ ಮತ್ತು ದೇವಾಲಯಗಳಿಂದ ಕೂಡಿದ ನಾಡಾಗಿದ್ದು ಸದಾ ರಮಣೀಯವಾದ ನಿಸರ್ಗದ ಚೆಲುವನ್ನು ಹೊತ್ತುಕೊಂಡಿರುವ ಪರಮಪಾವನವಾದ ಕ್ಷೇತ್ರ ಇದಾಗಿದೆ.
“ಮದ್ದ ಗಿರಿ” ಎಂಬ ಹೆಸರು 20ನೇ ಶತಮಾನದ ಆದಿಭಾಗದವರೆಗೂ ಬಳಕೆಯಲ್ಲಿತ್ತು ಎಂದು ಹಲವು ಇತಿಹಾಸಕಾರರು ಬಣ್ಣಿಸಿದ್ದಾರೆ. ನಂತರ 1926ರಲ್ಲಿ ಹಿಂದೆ ಏಕಶಿಲಾ ಬೆಟ್ಟದ ತುಂಬೆಲ್ಲಾ ಅಸಂಖ್ಯಾತವಾದ ಜೇನುಗೂಡುಗಳಿಂದ ಶೋಭಿಸುತ್ತಿದ್ದ ಮದ್ದಗಿರಿಯು, ಮಧುಗಿರಿ ಆಗಬೇಕೆಂಬ ಅಭಿಲಾಷೆ ಹೊತ್ತಿದ್ದ ಜ್ಞಾನಪೀಠ ಪುರಸ್ಕೃತರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರು ಮಧುಗಿರಿಯ ಆಗಿನ ಉಪವಿಭಾಗಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಮತ್ತೆ ಮದ್ದಗಿರಿಗೆ ಒಳ್ಳೆಯ ಹೆಸರು ಇಡಬೇಕೆಂದು ತೀರ್ಮಾನಿಸಿ ಊರಿನಲ್ಲಿದ್ದ ಗಿರಿಯ ನೆನಪೂ ಉಳಿಯಬೇಕು, ಹೆಸರು ಚೆನ್ನಾಗಿರಬೇಕು, ಎಂದು ಯೋಚಿಸಿ ಬೆಟ್ಟದಲ್ಲಿ ದೊರೆಯುತ್ತಿದ್ದ ಜೇನಿನ ನೆನಪು ಸಾರ್ಥಕವಾಗುವಂತೆ (ಮಧು-ಜೇನು, ಗಿರಿ-ಬೆಟ್ಟ) 1926ರಲ್ಲಿ “ಮಧುಗಿರಿ” ಎಂದು ಮರುನಾಮಕರಣ ಮಾಡಿದರು. ಇನ್ನು ಇಲ್ಲಿನ ದಾಳಿಂಬೆ ಮಧುಗಿರಿಯ ಮಧು ಎಂದೆ ಖ್ಯಾತವಾಗಿದೆ.
ಏಷ್ಯಾ ಖಂಡದಲ್ಲಿ ಅತಿ ದೊಡ್ಡ ಏಕಶಿಲಾ ಬೆಟ್ಟವೆಂದು ಕರೆಸಿಕೊಳ್ಳುವ ಮಧುಗಿರಿಯ ಬೆಟ್ಟ ಸುಮಾರು 121 ಎಕರೆಗಳಷ್ಟು ವಿಸ್ತಾರವಾಗಿತ್ತು 3930 ಅಡಿ ಎತ್ತರವಾಗಿದೆ. ಈ ಬೆಟ್ಟವನ್ನು ದಕ್ಷಿಣ ದಿಕ್ಕಿನಿಂದ ನೋಡಿದಾಗ ಮದಿಸಿದ ಕರಿಯಂತೆ ಕಾಣುತ್ತದೆ. ಮದ್ದಾನೆಯಂತೆ ಕಂಡುದರಿಂದ ಇದಕ್ಕೆ ಮದ್ದಗಿರಿ ಎಂಬ ಹೆಸರು ಬಂದಿರಬೇಕು ಎಂದು ಪೂರ್ವಜರ ಅಭಿಪ್ರಾಯ.
ಮಧುಗಿರಿ ಇತಿಹಾಸ: ಇಲ್ಲಿ ಅನೇಕ ಅತಿರಥ ಮಹಾರಾಜರು, ಪಾಳೆಗಾರರು, ಸಾಮಂತ ರಾಜರುಗಳು, ಪರ್ಶಿಯನ್ ನವಾಬರು, ಮರಾಠರು, ಬ್ರಿಟಿಷರು ಆಳ್ವಿಕೆ ಮಾಡಿ, ಸಾಕಷ್ಟು ರಾಜರುಗಳು ರಾಜಧಾನಿ ಮಾಡಿಕೊಂಡು, ಅಭಿವೃದ್ಧಿ ಪಡಿಸಿ ಹೋಗಿದ್ದಾರೆ. ಕೋಟೆ ಕೊತ್ತಲಗಳನ್ನು ಕಟ್ಟಿ ಸರ್ಪಗಾವಲು ಸೃಷ್ಟಿಸಿ ಇತಿಹಾಸ ನಿರ್ಮಿಸಿ ಹೋಗಿದ್ದಾರೆ.
ಚಾರಣಪ್ರಿಯರಿಗಂತೂ ಹೇಳಿ ಮಾಡಿಸಿದ ಜಾಗ ಇದಾಗಿದೆ ಬೆಟ್ಟದ ಮೇಲಿನ ಕೋಟೆ ಹತ್ತಲು ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮೆಟ್ಟಿಲುಗಳು ಪ್ರಾರಂಭವಾಗುತ್ತವೆ, ಅಲ್ಲಿಂದ ಅಂತರಾಳದ ಬಾಗಿಲು, ದಿಡ್ಡಿ ಬಾಗಿಲು, ಮೈಸೂರು ಬಾಗಿಲು, ಹಿಂದೆ ಇದ್ದವೆಂದು ಗೋಚರವಾಗುತ್ತದೆ, ಕೋಟೆಯ ಗೋಡೆಯುದ್ದಕ್ಕೂ ಬತ್ತದ ತೆನೆ ಆಕಾರದ ರಚನೆಗಳನ್ನು ಕಾಣಬಹುದು, ಮಳೆಗಾಲದಲ್ಲಿ ಬಂಡೆ ಜಾರುವ ಸಂಭವ ಇರುವುದರಿಂದ ಚಾರಣ ಅಪಾಯಕಾರಿ. ಕಡು ಬೇಸಿಗೆ ಹಾಗೂ ಚಳಿಗಾಲದಲ್ಲಿ ಚಾರಣಕ್ಕೆ ಸೂಕ್ತ. ಮಧುಗಿರಿಯ ಬೆಟ್ಟಕ್ಕೆ ಚಾರಣ ಮಾಡುವುದೇ ಒಂದು ಭಾಗ್ಯ ಇಲ್ಲಿ ಚಾರಣ ಮಾಡುವ ಸಂದರ್ಭದಲ್ಲಿ ಸಿಗುವ ನಿಸರ್ಗದೌತಣ ಯಾವ ಊಟಿಯಲ್ಲಿಯೂ ಸಿಗುವುದಿಲ್ಲ, ನನ್ನ ಪ್ರಿಯ ಚಾರಣ ಸ್ಥಳವೇ ಮಧುಗಿರಿ ಬೆಟ್ಟ.
ಆಗಸ್ಟ್ 15ರಂದು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರೊಳಗೂಡಿ ಮಧುಗಿರಿ ಬೆಟ್ಟದ ತುದಿಯವರೆಗೂ ಹತ್ತಿ ಅಲ್ಲಿ ಎಲ್ಲರೂ ಒಗ್ಗೂಡಿ ಧ್ವಜಾರೋಹಣ ಮಾಡುವರು.
ಈ ಬೆಟ್ಟದ ತಪ್ಪಲಿನಲ್ಲಿರುವ ಮಲ್ಲೇಶ್ವರ ಸ್ವಾಮಿ ದೇಗುಲ ಮತ್ತು ವೆಂಕಟರಮಣಸ್ವಾಮಿ ದೇಗುಲಗಳೆರಡು ಮಧುಗಿರಿಗೆ ಒಂದು ಕಳಶವಿದ್ದಂತೆ. ಇವು ಪ್ರಾಚೀನ ಕಾಲದಿಂದಲೂ ತುಂಬಾ ಪ್ರಾಮುಖ್ಯತೆಯನ್ನು ಪಡೆದಿವೆ. ಇನ್ನೂ ಮಧುಗಿರಿಯ ಹೆಬ್ಬಾಗಿಲಲ್ಲಿರುವ ದಂಡಿಮಾರಮ್ಮನವರ ದೇವಸ್ಥಾನವು ಮಧುಗಿರಿ ಪಟ್ಟಣವು ಸುಭಿಕ್ಷವಾಗಿವಾಗಿರುವಂತೆ ಕಾವಲು ಕಾಯಲು ಆ ತಾಯಿ ಊರ ಹೆಬ್ಬಾಗಿಲಲ್ಲೇ ನೆಲೆಸಿದ್ದಾಳೆ.