ಹೈಟೆಕ್ ಬಸ್‌ ನಿಲ್ದಾಣ

ನ. 25ರಂದು ಬಸ್‌ ನಿಲ್ದಾಣ ತೆರವು; ಜೆ.ಸಿ.ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಘಟಕ- 1ಕ್ಕೆ ಸ್ಥಳಾಂತರ

ತಲೆ ಎತ್ತಲಿದೆ ‘ಹೈಟೆಕ್’ ಬಸ್‌ ನಿಲ್ದಾಣ

ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ಬಹುಮಹಡಿಯ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣಗೊಳ್ಳಲಿದೆ. ತುಮಕೂರಿಗರ ಬಹುದಿನದ ಬೇಡಿಕೆ ಇನ್ನೆರಡು ವರ್ಷದಲ್ಲಿ ಈಡೇರಲಿದೆ.

ತುಮಕೂರು ಬಸ್‌ ನಿಲ್ದಾಣದಿಂದ ರಾಜ್ಯದ ವಿವಿಧೆಡೆಗೆ ನಿತ್ಯ ಸುಮಾರು 2,992 ಬಸ್‌ಗಳು ಹೊರಡುತ್ತವೆ. (ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ವೇಗದೂತ ಸಾರಿಗೆಗಳು ಸೇರಿ). ರಾಜ್ಯದ ಬಹುತೇಕ ಜಿಲ್ಲೆಗಳಿಗೂ ಈ ನಿಲ್ದಾಣ ಸಂಪರ್ಕ ಕೊಂಡಿಯಂತಿದೆ. ಆದರೂ ಬಸ್‌ ನಿಲ್ದಾಣ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿತ್ತು. ಸಮರ್ಪಕ ಶೌಚಾಲಯ ವ್ಯವಸ್ಥೆ, ತಂಗಲು ಕೊಠಡಿಗಳಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಸ್ಮಾರ್ಟ್‌ ಸಿಟಿ ಯೋಜನೆಯಡಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತಿದೆ.

25ಕ್ಕೆ ತೆರವು: ಕಾಮಗಾರಿ ಕಾರಣ ಈಗಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣವನ್ನು ನ. 25ರಂದು ತೆರವುಗೊಳಿಸಿ ಜೆ.ಸಿ.ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಘಟಕ- 1ರ ಸ್ಥಳಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ. ಈ ಹಿಂದೆ ನ. 18ರಂದು ಬಸ್‌ ನಿಲ್ದಾಣ ತೆರವುಗೊಳಿಸಲು ಜಿಲ್ಲಾಧಿಕಾರಿ ಗಡುವು ನೀಡಿದ್ದರು. ಬದಲಾಗುವ ಬಸ್‌ ಸಂಚಾರ ಮಾರ್ಗಗಳಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳದ ಕಾರಣ ಹಾಗೂ ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಸ್ಥಳಾಂತರ ತಡವಾಗಿದೆ.

ನಗರದ ಜೆ.ಸಿ.ರಸ್ತೆ, ಪ್ರಶಾಂತ್ ಚಿತ್ರಮಂದಿರ ಬಳಿ, ಅಶೋಕ ರಸ್ತೆಗಳ ಬದಿಯಲ್ಲಿರುವ ತಳ್ಳುಗಾಡಿ ಅಂಗಡಿ, ಹಣ್ಣಿನ ಅಂಗಡಿ ಸೇರಿದಂತೆ ಇತರ ಅಂಗಡಿಗಳನ್ನು ಮಹನಗರ ಪಾಲಿಕೆಯಿಂದ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ ಅಶೋಕ ರಸ್ತೆಯಿಂದ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಪ್ರವೇಶಿಸುವ ದ್ವಾರದ ಬಲಬದಿಯಲ್ಲಿ ತೆರೆದ ಚರಂಡಿಗಳಿವೆ. ವಾಹನಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ಚರಂಡಿಗಳ ಮೇಲ್ಭಾಗದಲ್ಲಿ ಸ್ಲ್ಯಾಬ್‌ಗಳನ್ನು ಅಳವಡಿಸಲಾಗುತ್ತಿದೆ.

ವಿನಾಯಕ ಮಾರುಕಟ್ಟೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ: ತಾತ್ಕಾಲಿಕ ಬಸ್‌ ನಿಲ್ದಾಣದ ಎರಡೂ ಕಡೆ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 200ರಿಂದ 300 ದ್ವಿಚಕ್ರ
ವಾಹನಗಳು ಮಾತ್ರ ಇಲ್ಲಿ ನಿಲ್ಲಬಹುದು. ಹಾಗಾಗಿ ಸ್ಥಳದ ಅಭಾವ ಇರುವುದರಿಂದ ವಿನಾಯಕ ಮಾರುಕಟ್ಟೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಮುಂಭಾಗ ನಿಲ್ಲುವ ಭಾರಿ ವಾಹನಗಳಿಗೆ ನಗರದ ಒಳಗಡೆ ಪಾರ್ಕಿಂಗ್‌ಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.

ಅಲ್ಲದೆ ಮಂಡಿಪೇಟೆ ಸೇರಿದಂತೆ ನಗರದ ವಹಿವಾಟು ಪ್ರದೇಶಗಳಿಗೆ ಸರಕನ್ನು ತರುವ ಭಾರಿ ವಾಹನಗಳಿಗೆ ರಾತ್ರಿ 9ರಿಂದ ಬೆಳಿಗ್ಗೆ 8ರವರೆಗೆ ಒಳ ಪ್ರವೇಶಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಇದರಿಂದ ನಗರದ ಸಂಚಾರ ದಟ್ಟಣೆಯೂ ತಕ್ಕಮಟ್ಟಿಗೆ ತಗ್ಗಬಹುದು. ಹೀಗೆ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ನಡೆಯಲು ಅಗತ್ಯವಾದ ಮುನ್ನಚ್ಚರಿಕೆಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

ಇನ್ನು ಅಶೋಕ ರಸ್ತೆ, ಗುಬ್ಬಿ ವೀರಣ್ಣ ರಸ್ತೆ, ಜೆ.ಸಿ.ರಸ್ತೆಯಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಯೂ ಭರದಿಂದ ಸಾಗಿವೆ. ಶೀಘ್ರವೇ ಅಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆ ರಸ್ತೆಗಳೂ ಸುಗಮ ಸಂಚಾರಕ್ಕೆ ಮುಕ್ತಗೊಳ್ಳಲಿವೆ.

6 ಮಹಡಿಯಲ್ಲಿ ನಿರ್ಮಾಣ

ಒಟ್ಟು 6 ಅಂತಸ್ತುಗಳನ್ನು ಒಳಗೊಂಡ ಹೈಟೆಕ್‌ ಬಸ್‌ ನಿಲ್ದಾಣ Rs 82 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 4 ಎಕರೆ ವಿಸ್ತೀರ್ಣದಲ್ಲಿ ಬಸ್‌ ನಿಲ್ದಾಣ ತಲೆಎತ್ತಲಿದೆ. ಕೆಎಸ್‌ಆರ್‌ಟಿಸಿ ಹಾಗೂ ಸ್ಮಾರ್ಟ್‌ಸಿಟಿಗೆ ಆದಾಯ ಬರುವಂತೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ.

2 ಕೆಳ ಅಂತಸ್ತುಗಳು ನಿರ್ಮಾಣಗೊಳ್ಳಲಿವೆ. ಅಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುವುದು. ಅದರ ಮೇಲೆ ನಾಲ್ಕು ಅಂತಸ್ತು ನಿರ್ಮಾಣಗೊಳ್ಳಲಿದೆ. ಮೊದಲ ಅಂತಸ್ತಿನಲ್ಲಿ ನಗರ ಸಾರಿಗೆ ನಿಲ್ದಾಣ, 2ನೇ ಮಹಡಿಯಲ್ಲಿ ವೇಗದೂತ ಬಸ್‌ ನಿಲ್ದಾಣ, ಮೇಲಿನ 2 ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದರು.

ಏನೇನು ಸೌಲಭ್ಯ

ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅತ್ಯಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಕೆಲ ಸರ್ಕಾರಿ ಕಚೇರಿಗಳು, ಶಾಪಿಂಗ್‌ ಕಾಂಪ್ಲೆಕ್ಸ್, ಹೋಟೆಲ್‌ಗಳನ್ನು ಒಳಗೊಂಡಂತೆ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಬೈಕ್‌, ಕಾರು ಪಾರ್ಕಿಂಗ್‌ಗೆ ಸುಲಲಿತ ವ್ಯವಸ್ಥೆ ಇರಲಿದೆ.

Leave a Reply

Your email address will not be published. Required fields are marked *

×