ನಾಳೆಯಿಂದ ಉಪ್ಪಾರಹಳ್ಳಿ ಗೇಟ್– ರೈಲ್ವೆ ನಿಲ್ದಾಣ ರಸ್ತೆ ಬಂದ್
ತುಮಕೂರು: ನಗರದ ಉಪ್ಪಾರಹಳ್ಳಿ ಗೇಟಿನಿಂದ ತುಮಕೂರು ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆ ದುರಸ್ತಿ ಕಾರ್ಯ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಡಿ.13ರಿಂದ ಈ ರಸ್ತೆಯಲ್ಲಿ ಸಂಚಾರ ಬಂದ್ ಆಗಲಿದೆ.
ತುಮಕೂರು–ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳೊಂದಿಗೆ ಮಾತನಾಡಿದ ಶಾಸಕ ಬಿ.ಜಿ.ಜ್ಯೋತಿ ಗಣೇಶ್, ‘ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ ದೊರೆತಿದೆ. ಸ್ಮಾರ್ಟ್ಸಿಟಿ ಯೋಜನೆ ಹಾಗೂ ಮಹಾನಗರ ಪಾಲಿಕೆಯಿಂದ ಕಾಮಗಾರಿ ನಡೆಯಲಿದೆ’ ಎಂದರು.
ಹತ್ತು ದಿನಗಳಲ್ಲಿ ದುರಸ್ತಿ ಕಾರ್ಯ ಮುಗಿಯಲಿದೆ. ಡಿ.13ರಿಂದ ಈ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗುತ್ತದೆ. ರಸ್ತೆಯನ್ನು ಬಳಸುತ್ತಿದ್ದ ವಾಹನ ಸವಾರರು, ಅದರಲ್ಲೂ ವಿಶೇಷವಾಗಿ ರೈಲ್ವೆ ಪ್ರಯಾಣಿಕರು ಬದಲಿ ರಸ್ತೆ ಬಳಸುವ ಮೂಲಕ ಸಹಕರಿಸಬೇಕು ಎಂದು ಕೋರಿದರು.