ದಸರಾ ಹಾಗೂ ನವರಾತ್ರಿ ಹಬ್ಬದ ಶುಭಾಶಯಗಳು

ದಸರಾ ಎಂದರೆ ಹೆಸರೇ ಹೇಳುವಂತೆ ಇದು ದಶಮಿ – ಹತ್ತನೆಯ ದಿನ. ಅಂದರೆ ದಸರಾ ಉತ್ಸವದ ಹತ್ತನೆಯ ದಿನ. ‘ದಶ ಅಹರ್’ – ದಶಹರ – ದಶರಾ – ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿ ಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವ ದಿನ. ಒಂಬತ್ತು ದಿನಗಳ ನವರಾತ್ರಿ ಸಂಭ್ರಮದ ಬಳಿಕ ವಿಜಯದಶಮಿ ಹಬ್ಬ ಆಚರಿಸಲಾಗುತ್ತದೆ.

ನವರಾತ್ರಿ ಉತ್ಸವದ ಕೊನೆಯ ದಿನ. ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನ ಎಂದೂ ಹೇಳಲಾಗುತ್ತದೆ.

ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವದ ದಿನ ಎಂದೂ ಭಾವಿಸಲಾಗಿದೆ.

ಶಿವನ ಭಕ್ತನಾಗಿದ್ದ ಮಹಿಷಾಸುರ ಘೋರ ತಪಸ್ಸು ಮಾಡಿ ಶಿವನಿಂದ ಅಮರನಾಗುವ ವರ ಪಡೆಯುತ್ತಾನೆ. ಮಹಿಷಾಸುರ ಜನರನ್ನು ಹಿಂಸಿಸುತ್ತಾನೆ ಮತ್ತು ಮೂರು ಲೋಕದ ಮೇಲೆ ತನ್ನ ಸಾಮ್ರಾಜ್ಯ ಕಟ್ಟುತ್ತಾನೆ. ಸ್ವರ್ಗಲೋಕದ ದೇವದೇವತೆಗಳೆಲ್ಲರೂ ಬಂದು ಶಿವನಲ್ಲಿ ತಮ್ಮ ಸಂಕಷ್ಟ ಹೇಳಿಕೊಳ್ಳುವರು ಮತ್ತು ತಮ್ಮ ರಾಜ್ಯ ಮರಳಿ ನೀಡಬೇಕೆಂದು ಪ್ರಾರ್ಥಿಸುವರು. ಮಹಿಷಾಸುರನ ಹಿಂಸೆಯಿಂದ ಮೂರು ಲೋಕಗಳನ್ನು ರಕ್ಷಿಸಲು ತ್ರಿಮೂತ್ರಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಜತೆಯಾಗಿ ದುರ್ಗೆಯ ಸ್ಥಾಪಿಸುವರು.

ದುರ್ಗೆಯ ಸೌಂದರ್ಯಕ್ಕೆ ಮಾರುಹೋದ ಮಹಿಷಾಸುರ ತನ್ನನ್ನು ಮದುವೆಯಾಗಬೇಕೆಂದು ಆಕೆಯನ್ನು ಕೇಳಿಕೊಳ್ಳುತ್ತಾನೆ. ದುರ್ಗೆಯು ಇದಕ್ಕೆ ತಯಾರಾಗುತ್ತಾಳೆ. ಆದರೆ ತನ್ನ ವಿರುದ್ಧ ಯುದ್ಧ ಗೆಲ್ಲಬೇಕೆಂದು ಆಕೆ ಹೇಳುತ್ತಾಳೆ. ಈ ಯುದ್ಧವು ಒಂಭತ್ತು ದಿನಗಳ ಕಾಲ ನಡೆಯಿತು ಮತ್ತು 9ನೇ ದಿನದಂದು ದುರ್ಗೆಯು ಮಹಿಷಾಸುರನನ್ನು ವಧೆ ಮಾಡಿದಳು. ಈ 9 ದಿನಗಳನ್ನು ನವರಾತ್ರಿ ಎಂದು ಕರೆಯಲಾಗುತ್ತದೆ. 9ನೇ ಹಾಗೂ ಕೊನೆಯ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ದುಷ್ಟ ಶಕ್ತಿ ವಿರುದ್ಧ ಒಳ್ಳೆಯದ ವಿಜಯ ಸಾಧಿಸಿದ ದಿನ.

ಮೈಸೂರು ದಸರಾ: ಈ ಹತ್ತು ದಿನಗಳನ್ನು ಮೈಸೂರಿನಲ್ಲಿ ವಿಶೇಷ ರೀತಿಯಿಂದ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಮೈಸೂರನ್ನು ಆಳಿದ ರಾಜ ಮನೆತನವಾದ ಒಡೆಯರ ಕುಲ ದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲಾ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ಕ್ರಿ.ಶ. ೧೬೪೦ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್ ಅವರಿಂದ ಆರಂಭವಾಗಿ, ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಜನರು ಜಂಬೂಸವಾರಿ ವೀಕ್ಷಣೆಗಾಗಿ ಆಗಮಿಸುತ್ತಾರೆ.

 

×