ವಿಶ್ವಪ್ರಸಿದ್ಧ ಗೂಳೂರು ಗಣೇಶ
ಹಲವು ವಿಶೇಷತೆಗಳ ಆಗರ; 45 ದಿನ ವೈಭವದ ಪೂಜೆ; ಭೃಗುಮುನಿಗಳಿಂದ ಪ್ರತಿಷ್ಠಾಪನೆಗೊಂಡ ಗಣೇಶನೇ ಆಕರ್ಷಣೆ
ಗೂಳೂರು ಗಣೇಶನಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ .ಈ ಗಣಪತಿಯ ಆಕಾರ ಮತ್ತು ಗಾತ್ರಗಳಲ್ಲಿ ತನ್ನದೇ ಆದ ವಿಶೇಷ ಶೈಲಿ ಹೊಂದಿದೆ. ಇಂತಹ ವೈಶಿಷ್ಟಪೂರ್ಣ ಗಣಪತಿಯ ದರ್ಶನ ಪಡೆಯಬೇಕಾದರೆ ನೀವು ತುಮಕೂರು ಸಮೀಪದ ಗೂಳೂರು ಗ್ರಾಮಕ್ಕೆ ಪ್ರಯಾಣ ಮಾಡಬೇಕು.
ದೀಪಾವಳಿಯಂದು ಮೊದಲ ಪೂಜೆ: ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಕಡೆಗಳಲ್ಲಿ ಗಣೇಶ ಚತುರ್ಥಿಯ ದಿನ ಗಣಪತಿಯನ್ನು ಪ್ರತಿಷ್ಠಾಪಿಸಿದರೆ ಗೂಳೂರಿನಲ್ಲಿ ಅಂದು ಮಣ್ಣಿನಿಂದ ಗಣಪತಿ ನಿರ್ಮಾಣ ಮಾಡಲು ಪ್ರಾರಂಭಿಸಲಾಗುತ್ತದೆ. ಬಳಿಕ ದೀಪಾವಳಿ ಹಬ್ಬದ ದಿನ ಈ ಗಣೇಶ ಪ್ರಥಮ ಪೂಜೆಗೆಸಿದ್ದಗೊಳ್ಳುತ್ತಾನೆ. ಬಳಿಕ ಅಂದು ವಿಶೇಷ ಪೂಜೆಯೊಂದಿಗೆ ಒಂದು ತಿಂಗಳಿಗಿಂತ ಹೆಚ್ಚು ಕಾಲ ಗ್ರಾಮಸ್ಥರು ಗಣೇಶನಿಗೆ ಪೂಜೆ ನೆರವೇರಿಸುತ್ತಾರೆ. ಈ ಗಣಪತಿ ಮಣ್ಣಿನಿಂದ ನಿರ್ಮಾಣಗೊಂಡಿದ್ದರೂ ಸಹ ವಜ್ರಖಚಿತವಾದ ಬೆಳ್ಳಿ ಆಭರಣಗಳನ್ನು ಗಣಪನಿಗೆ ಧರಿಸಲಾಗುತ್ತದೆ . ಇದು ವಿಶ್ವಪ್ರಸಿದ್ಧ ಗೂಳೂರು ಗಣಪನ ವಿಶೇಷ.
45 ದಿನ ವೈಭವದ ಪೂಜೆ: ದೀಪಾವಳಿಯಂದು ಮೊದಲ ಪೂಜೆ ನಡೆದ ಬಳಿಕ ಅಂದಿನಿಂದ 45 ದಿನಗಳ ಕಾಲ ವಿವಿಧ ಪೂಜೆ ಪುನಸ್ಕಾರಗಳಿಂದ ಆರಾಧನೆ ಮಾಡಲಾಗುತ್ತದೆ. ಗ್ರಾಮದ ಜನತೆ ಪ್ರತಿದಿನವೂ ಒಂದೊಂದು ರೀತಿಯಾಗಿ ವಿಶೇಷವಾಗಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸುವರು. ನಂತರ ಕಾರ್ತಿಕ ಮಾಸದ ಕೊನೆಯಲ್ಲಿ ಗೂಳೂರು ಗಣಪನನ್ನು ವೈಭವದ ಮೆರವಣಿಗೆ ಮೂಲಕ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಭೃಗುಮುನಿಗಳಿಂದ ಪ್ರತಿಷ್ಟಾಪನೆ
ಪುರಾಣ ಪ್ರಸಿದ್ಧ ಗೂಳೂರು ಗಣೇಶನನ್ನು ಸಾವಿರಾರು ವರ್ಷಗಳ ಹಿಂದೆ ಮೊಟ್ಟಮೊದಲಬಾರಿಗೆ ಭೃಗುಮುನಿಗಳು ಪ್ರತಿಷ್ಠಾಪನೆ ಮಾಡಿದರೆಂಬ ಇತಿಹಾಸವಿದೆ. ಅನಾದಿ ಕಾಲದಲ್ಲಿ ಕಾಶಿಯಾತ್ರೆ ಕೈಗೊಂಡಿದ್ದ ಭೃಗುಮುನಿಗಳು ಗೂಳೂರಿನಲ್ಲಿ ತಂಗಿದ್ದ ಸಂದರ್ಭದಲ್ಲಿ ಗಣಪತಿ ಹಬ್ಬ ಬಂದ ಕಾರಣ ಅಂದು ತಾವೇ ಚಿಕ್ಕ ಗಣಪನ ಮೂರ್ತಿಯನ್ನು ನಿರ್ಮಿಸಿ ಪೂಜಿಸಿದರು. ಅಂದು ಈ ಊರಿನಲ್ಲಿ ಗಣೇಶನ ಆರಾಧನೆ ಮುಂದುವರಿಸುವ ಬಗ್ಗೆ ಜನರಿಗೆ ಸೂಚನೆ ನೀಡಿದರಂತೆ. ಹೀಗಾಗಿ ಇಲ್ಲಿ ಅವರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಅವರ ಅಭಿಲಾಷೆ ಮೇರೆಗೆ ಅಂದಿನಿಂದ ಆರಂಭಗೊಂಡ ಗಣಪತಿಯ ಆರಾಧನೆ ಪ್ರತಿವರ್ಷ ನಿರಂತರವಾಗಿ ಸಾಗಿ ಬರುತ್ತಿದೆ.
ಗಣೇಶ ಹಬ್ಬದ ದಿನ ಗ್ರಾಮದ ಜನರೆಲ್ಲರೂ ಒಟ್ಟಿಗೆ ಸೇರಿ ಊರಿನ ಕೆರೆಯಂಗಳಕ್ಕೆ ತೆರಳಿ ಚಿಕ್ಕಗಣಪತಿ ಮೂರ್ತಿಯನ್ನು ಪೂಜಿಸಿ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸುತ್ತಾರೆ. ಇಲ್ಲಿನ ಮತ್ತೊಂದು ಕುತೂಹಲ ಸಂಗತಿಯೆಂದರೆ ವಿಜಯದಶಮಿ ದಿನ ಊರಿನ ಮನೆಗಳಲ್ಲಿ ಪೂಜಿಸುವ ಚಿಕ್ಕಗಣಪತಿ ಮೂರ್ತಿಗಳನ್ನು ದೊಡ್ಡ ಗಣೇಶನ ಹೊಟ್ಟೆಯೊಳಗೆ ಹಾಕಲಾಗುತ್ತದೆ. ಅಷ್ಟೇ ಅಲ್ಲ ಗಣಪನಿಗೆ ಪ್ರಿಯವಾದ ಭಕ್ಷ್ಯಗಳನ್ನು ಸಹ ಹೊಟ್ಟೆಗೆ ಹಾಕಿ ಗಣೇಶನನ್ನು ನಿರ್ಮಿಸಲಾಗುತ್ತದೆ.
ಅದ್ದೂರಿ ಮೆರವಣಿಗೆ: ಕಾರ್ತಿಕ ಮಾಸದ ಕೊನೆಯಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಂತರ ಗಣೇಶನನ್ನು ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಅಂದು ಇಲ್ಲಿನಡೆಯುವ ಉತ್ಸವ, ತೆಪ್ಪೋತ್ಸವ ಪಟಾಕಿಯ ಸಂಭ್ರಮ ನೋಡುಗರ ಕಣ್ಮನ ಸೆಳೆಯುತ್ತದೆ. ರಾಜ್ಯದ ಹಲವು ಕಡೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹಿಂದಿನ ಕಾಲದಲ್ಲಿ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಸಹ ಆಗಮಿಸುತ್ತಿದ್ದರು ಎಂದು ಸ್ಥಳಿಯರು ಹೇಳುತ್ತಾರೆ.
Nice place
yes he is correct
helped me
I like this place