ಮಧ್ಯಪ್ರದೇಶದಲ್ಲೊಬ್ಬಳು “ಆಧುನಿಕ ಶಬರಿ”, ಅಯೋಧ್ಯೆ ಪರಿಹಾರಕ್ಕಾಗಿ 27 ವರ್ಷ ಉಪವಾಸ ಮಾಡಿದ ಊರ್ಮಿಳಾ ಚತುರ್ವೇದಿ

ಜಬಲ್‌ಪುರ್ (ಮಧ್ಯಪ್ರದೇಶ, ಪಿಟಿಐ): ರಾಮನ ಆಗಮನಕ್ಕಾಗಿ ಕಾದಿದ್ದ ಶಬರಿಯ ಕಥೆ ಎಲ್ಲರಿಗೂ ಗೊತ್ತಿರುವಂಥದ್ದೆ. ಆದರೆ, ಇಲ್ಲೊಬ್ಬ ಆಧುನಿಕ ಶಬರಿ, ರಾಮನ ಬದಲಿಗೆ ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ ಬರೋಬ್ಬರಿ 27 ವರ್ಷ ಊಟ ಬಿಟ್ಟು ಕಾದಿದ್ದಾರೆ!

ಅವರೇ ಮಧ್ಯಪ್ರದೇಶದ ಜಬಲ್‌ಪುರದ ಸಂಸ್ಕೃತ ಭಾಷಾ ಶಿಕ್ಷಕಿ ಊರ್ಮಿಳಾ ಚರ್ತುವೇದಿ (81). ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ 1992ರಿಂದ ಅನ್ನ–ಆಹಾರ ತ್ಯಜಿಸಿದ್ದ ಊರ್ಮಿಳಾ ಅವರು, ಜಮೀನು ವಿವಾದ ಇತ್ಯರ್ಥವಾಗುವ ತನಕ ಅಂದರೆ 27 ವರ್ಷ ಕಾಲ ಬರೀ ಹಣ್ಣು ಮತ್ತು ಹಾಲು ಕುಡಿದು ಬದುಕಿದ್ದಾರೆ.

‘ಶನಿವಾರ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಅಯೋಧ್ಯೆ ತೀರ್ಪು ನೀಡಿದ್ದನ್ನು ಕೇಳಿ ಸಂತೋಷಗೊಂಡಿರುವ ಅಮ್ಮ. ಇದೀಗ ಊಟ ಮಾಡಲು ತೀರ್ಮಾನಿಸಿದ್ದಾರೆ’ ಎಂದು ಅವರ ಮಗ ಅಮಿತ್ ಚರ್ತುವೇದಿ ಹೇಳಿದರು.

‘ಶ್ರೀರಾಮನ ದೊಡ್ಡ ಭಕ್ತೆಯಾಗಿರುವ ಅಮ್ಮ ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ ಎರಡು ದಶಕಗಳಿಂದ ಕಾಯುತ್ತಿದ್ದರು. ಖಾಸಗಿ ವಿದ್ಯಾಸಂಸ್ಥೆ ಯೊಂದರಲ್ಲಿ ಸಂಸ್ಕೃತ ಭಾಷಾ ಶಿಕ್ಷಕಿಯಾಗಿರುವ ಅಮ್ಮ, 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸಗೊಂಡು ದೇಶದಾದ್ಯಂತ ಹಿಂಸಾಚಾರ ನಡೆದಾಗ ತುಂಬಾ ಖಿನ್ನಗೊಂಡಿದ್ದರು. ಅಂದಿನಿಂದಲೇ ಅವರು ಉಪವಾಸ ತೀರ್ಮಾನ ಕೈಗೊಂಡರು. ತಮ್ಮ ಆಹಾರವನ್ನು ಬರೀ ಹಣ್ಣು ಮತ್ತು ಹಾಲಿಗೆ ಸೀಮಿತಗೊಳಿಸಿಕೊಂಡರು. ಸಂಬಂಧಿಕರು ಹಲವು ಬಾರಿ ಮನವಿ ಮಾಡಿದರೂ ಅವರು ತಮ್ಮ ತೀರ್ಮಾನ ಕೈಬಿಡಲಿಲ್ಲ’ ಎಂದು ಅಮಿತ್ ಮಾಹಿತಿ ನೀಡಿದರು.

‘ಅಯೋಧ್ಯೆ ಜಮೀನು ವಿವಾದ ಪರಿಹಾರವಾಗಿ ಅಮ್ಮನ ಆಸೆ ನೆರವೇರಿದೆ. ಅಮ್ಮನ ಉಪವಾಸ ಕೈಬಿಡುವ ‘ಉದ್ಯಾಪನ್’ ಕಾರ್ಯಕ್ರಮವನ್ನು ಶೀಘ್ರದಲ್ಲೇ ನಮ್ಮ ಕುಟುಂಬ ಆಯೋಜಿಸಲಿದೆ. ನನ್ನಮ್ಮ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿಲ್ಲ’ ಎಂದೂ ಅಮಿತ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

×